ಯೆರೆಮೀಯ 39:1-18
39 ಯೆಹೂದದ ರಾಜ ಚಿದ್ಕೀಯನ ಆಳ್ವಿಕೆಯ ಒಂಬತ್ತನೇ ವರ್ಷದ ಹತ್ತನೇ ತಿಂಗಳಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ,* ಅವನ ಎಲ್ಲಾ ಸೈನ್ಯ ಯೆರೂಸಲೇಮಿಗೆ ಬಂದು ಮುತ್ತಿಗೆ ಹಾಕ್ತು.+
2 ಚಿದ್ಕೀಯನ ಆಳ್ವಿಕೆಯ 11ನೇ ವರ್ಷದ ನಾಲ್ಕನೇ ತಿಂಗಳ ಒಂಬತ್ತನೇ ದಿನ ಅವರು ಪಟ್ಟಣದ ಗೋಡೆ ಒಡೆದು ಒಳಗೆ ನುಗ್ಗಿದ್ರು.+
3 ಬಾಬೆಲಿನ ರಾಜನ ಎಲ್ಲ ಅಧಿಕಾರಿಗಳು ಅಂದ್ರೆ ಸಮ್ಗರ್‌ನಾದ* ನೇರ್ಗಲ್-ಸರೆಚರ್, ರಬ್ಸಾರೀಸ್‌ನಾದ ನೆಬೋ ಸರ್ಸೆಕೀಮ್,* ರಬ್ಮಾಗ್‌ನಾದ* ನೇರ್ಗಲ್-ಸರೆಚರ್, ಬಾಬೆಲಿನ ರಾಜನ ಉಳಿದೆಲ್ಲ ಅಧಿಕಾರಿಗಳು ಪಟ್ಟಣದ ಒಳಗೆ ಬಂದು ‘ಮಧ್ಯ ಬಾಗಿಲ’ ಹತ್ರ ಕೂತ್ಕೊಂಡ್ರು.+
4 ಯೆಹೂದದ ರಾಜ ಚಿದ್ಕೀಯ ಎಲ್ಲ ಸೈನಿಕರು ಇದನ್ನ ನೋಡಿ ಅಲ್ಲಿಂದ ಓಡಿಹೋದ್ರು.+ ರಾತ್ರೋರಾತ್ರಿ ರಾಜನ ತೋಟದ ಒಳಗಿಂದ ಹೋಗಿ ಎರಡು ಗೋಡೆಗಳ ಮಧ್ಯ ಇರೋ ಬಾಗಿಲ ಮೂಲಕ ಪಟ್ಟಣದಿಂದ ಹೊರಗೆ ಹೋದ್ರು. ಅಲ್ಲಿಂದ ಅರಾಬಾದ ದಾರಿ ಹಿಡಿದು ಮುಂದೆ ಹೋದ್ರು.+
5 ಆದ್ರೆ ಕಸ್ದೀಯರ ಸೈನಿಕರು ಅವ್ರ ಹಿಂದೆನೇ ಹೋಗಿ ಯೆರಿಕೋವಿನ ಬಯಲು ಪ್ರದೇಶಗಳಲ್ಲಿ ಚಿದ್ಕೀಯನನ್ನ ಹಿಡಿದು+ ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಹತ್ರ ತಂದ್ರು. ಆ ರಾಜ ಆಗ ಹಾಮಾತ್+ ದೇಶದ ರಿಬ್ಲದಲ್ಲಿ+ ಇದ್ದ. ಅಲ್ಲಿ ಅವನು ಚಿದ್ಕೀಯನಿಗೆ ಶಿಕ್ಷೆ ಕೊಟ್ಟ.
6 ಆ ರಿಬ್ಲದಲ್ಲೇ ಚಿದ್ಕೀಯನ ಕಣ್ಮುಂದೆನೇ ಅವನ ಗಂಡುಮಕ್ಕಳನ್ನ ಕೊಂದ. ಯೆಹೂದದ ಎಲ್ಲ ಪ್ರಮುಖರನ್ನ ಕೊಂದ.+
7 ಆಮೇಲೆ ಅವನು ಚಿದ್ಕೀಯನನ್ನ ಕುರುಡನಾಗಿ ಮಾಡಿದ. ಚಿದ್ಕೀಯನಿಗೆ ತಾಮ್ರದ ಬೇಡಿಗಳನ್ನ ಹಾಕಿ ಬಾಬೆಲಿಗೆ ಕರ್ಕೊಂಡು ಹೋದ.+
8 ಆಮೇಲೆ ಕಸ್ದೀಯರು ಯೆರೂಸಲೇಮಲ್ಲಿದ್ದ ರಾಜನ ಅರಮನೆಯನ್ನ ಜನ್ರ ಮನೆಗಳನ್ನ ಸುಟ್ಟು ಹಾಕಿದ್ರು.+ ಆ ಪಟ್ಟಣದ ಗೋಡೆಗಳನ್ನ ನಾಶ ಮಾಡಿಬಿಟ್ರು.+
9 ಕಾವಲುಗಾರರ ಮುಖ್ಯಸ್ಥನಾದ ನೆಬೂಜರದಾನ+ ಪಟ್ಟಣದಲ್ಲಿ ಉಳಿದಿದ್ದ ಜನ್ರನ್ನ, ಯೆಹೂದ್ಯರ ಪಕ್ಷ ಬಿಟ್ಟು ಕಸ್ದೀಯರ ಜೊತೆ ಸೇರ್ಕೊಂಡಿದ್ದವರನ್ನ, ಉಳಿದ ಬೇರೆಲ್ಲ ಜನ್ರನ್ನ ಬಾಬೆಲಿಗೆ ಕೈದಿಗಳಾಗಿ ಕರ್ಕೊಂಡು ಹೋದ.
10 ಆದ್ರೆ ಅವನು ಏನೂ ಗತಿ ಇಲ್ಲದ ಕೆಲವು ಕಡು ಬಡವ್ರನ್ನ ಯೆಹೂದ ದೇಶದಲ್ಲಿ ಬಿಟ್ಟು ಹೋದ. ಅಷ್ಟೇ ಅಲ್ಲ ಆ ದಿನ ಅವ್ರಿಗೆ ದ್ರಾಕ್ಷಿತೋಟಗಳ, ಹೊಲಗಳ ಕೆಲಸ* ಕೊಟ್ಟ.+
11 ಆಮೇಲೆ ಬಾಬೆಲಿನ ರಾಜ ನೆಬೂಕದ್ನೆಚ್ಚರ* ಕಾವಲುಗಾರರ ಮುಖ್ಯಸ್ಥನಾದ ನೆಬೂಜರದಾನನಿಗೆ ಯೆರೆಮೀಯನ ವಿಷ್ಯದಲ್ಲಿ
12 “ನೀನು ಹೋಗಿ ಯೆರೆಮೀಯನನ್ನ ಹುಡುಕು. ಅವನು ಸಿಕ್ಕಿದ ಮೇಲೆ ಅವನನ್ನ ಚೆನ್ನಾಗಿ ನೋಡ್ಕೊ. ಅವನಿಗೇನೂ ಹಾನಿ ಮಾಡಬೇಡ. ಅವನು ಏನು ಕೇಳ್ತಾನೋ ಅದೆಲ್ಲ ಕೊಡು”+ ಅಂತ ಅಪ್ಪಣೆ ಕೊಟ್ಟ.
13 ಹಾಗಾಗಿ ಕಾವಲುಗಾರರ ಮುಖ್ಯಸ್ಥ ನೆಬೂಜರದಾನ್, ರಬ್ಸಾರೀಸ್‌ನಾದ* ನೆಬೂಷಜ್ಬಾನ್, ರಬ್ಮಾಗ್‌ನಾದ* ನೇರ್ಗಲ್-ಸರೆಚರ್, ಬಾಬೆಲಿನ ರಾಜನ ಎಲ್ಲ ಪ್ರಮುಖ ಗಂಡಸರು ಕೆಲವರನ್ನ ಕಳಿಸಿ
14 ಯೆರೆಮೀಯನನ್ನ ‘ಕಾವಲುಗಾರರ ಅಂಗಳದಿಂದ’ ಹೊರಗೆ ಕರ್ಕೊಂಡು ಬರೋಕೆ ಹೇಳಿದ್ರು.+ ಆಮೇಲೆ ಅವನನ್ನ ಅಹೀಕಾಮನ+ ಮಗ ಶಾಫಾನನ+ ಮೊಮ್ಮಗ ಗೆದಲ್ಯನ+ ಕೈಗೆ ಒಪ್ಪಿಸಿ ಅವನ ಮನೆಗೆ ಕರ್ಕೊಂಡು ಹೋಗೋಕೆ ಹೇಳಿದ್ರು. ಹಾಗಾಗಿ ಯೆರೆಮೀಯ ಜನ್ರ ಜೊತೆ ಇದ್ದ.
15 ಯೆರೆಮೀಯ ‘ಕಾವಲುಗಾರರ ಅಂಗಳದಲ್ಲಿ’+ ಕೈದಿಯಾಗಿ ಇದ್ದಾಗ ಯೆಹೋವ ಅವನಿಗೆ ಹೀಗೆ ಹೇಳಿದ್ದನು
16 “ನೀನು ಹೋಗಿ ಇಥಿಯೋಪ್ಯದವನಾದ ಎಬೆದ್ಮೆಲೆಕನಿಗೆ+ ಹೀಗೆ ಹೇಳು ‘ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ನಾನು ಈ ಪಟ್ಟಣಕ್ಕೆ ಕೆಟ್ಟದು ಮಾಡ್ತೀನಿ, ಒಳ್ಳೇದು ಮಾಡಲ್ಲ ಅಂತ ಹೇಳಿದ್ದೆ. ಅದನ್ನ ಮಾಡೋ ದಿನ ಬಂದಿದೆ. ನನ್ನ ಮಾತು ನಿಜ ಆಗೋದನ್ನ ನೀನು ಕಣ್ಣಾರೆ ನೋಡ್ತೀಯ.”’
17 ‘ಆದ್ರೆ ಆ ದಿನದಲ್ಲಿ ನಿನ್ನನ್ನ ಕಾಪಾಡ್ತೀನಿ. ನೀನು ಯಾರಂದ್ರೆ ಭಯ ಪಡ್ತಿಯೋ ಆ ಜನ್ರ ಕೈಗೆ ನಿನ್ನನ್ನ ಒಪ್ಪಿಸಲ್ಲ’ ಅಂತ ಯೆಹೋವ ಹೇಳ್ತಾನೆ.
18 ‘ನಿನ್ನನ್ನ ಖಂಡಿತ ಕಾಪಾಡ್ತೀನಿ, ನೀನು ಕತ್ತಿಯಿಂದ ಸಾಯಲ್ಲ. ನನ್ನನ್ನ ನಂಬಿರೋದ್ರಿಂದ+ ನಿನ್ನ ಜೀವ ಉಳಿಯುತ್ತೆ’*+ ಅಂತ ಯೆಹೋವ ಹೇಳ್ತಾನೆ.”
ಪಾದಟಿಪ್ಪಣಿ
^ ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
^ ಬಹುಶಃ ಇದು ಬಿರುದು.
^ ಅಥವಾ ಹೀಬ್ರು ಪದಗಳನ್ನ ಇನ್ನೊಂದು ರೀತಿಯಲ್ಲಿ ಭಾಗ ಮಾಡಿದ್ರೆ “ನೇರ್ಗಲ್-ಸರೆಚರ್, ಸಮ್ಗರ್-ನೆಬೋ, ಸರ್ಸೆಕೀಮ್, ರಬ್ಸಾರೀಸ್.”
^ ಅಥವಾ “ಪ್ರಧಾನ ಮಂತ್ರವಾದಿ (ಜ್ಯೋತಿಷಿ).”
^ ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
^ ಬಹುಶಃ, “ಕಡ್ಡಾಯ ದುಡಿಮೆ.”
^ ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
^ ಅಥವಾ “ಆಸ್ಥಾನದ ಮುಖ್ಯಾಧಿಕಾರಿ.”
^ ಅಥವಾ “ಪ್ರಧಾನ ಮಂತ್ರವಾದಿ (ಜ್ಯೋತಿಷಿ).”
^ ಅಕ್ಷ. “ನಿನಗೆ ನಿನ್ನ ಜೀವ ಕೊಳ್ಳೆಯಾಗಿ ಸಿಗುತ್ತೆ.”