ಯೆಹೆಜ್ಕೇಲ 9:1-11

  • ಆರು ವಿನಾಶಕರು, ಶಾಯಿಕೊಂಬು ಇಟ್ಕೊಂಡಿದ್ದ ಪುರುಷ (1-11)

    • ಆರಾಧನಾ ಸ್ಥಳದಿಂದನೇ ಶಿಕ್ಷೆ ಶುರು (6)

9  ಆಮೇಲೆ ಅವನು “ಈ ಪಟ್ಟಣಕ್ಕೆ ಶಿಕ್ಷೆ ಕೊಡುವವ್ರನ್ನ ಬರೋಕೆ ಹೇಳಿ. ಪ್ರತಿಯೊಬ್ಬನೂ ತನ್ನ ಕೈಯಲ್ಲಿ ನಾಶನದ ಆಯುಧ ಹಿಡ್ಕೊಂಡು ಬರಲಿ!” ಅಂತ ಜೋರಾಗಿ ಹೇಳೋದನ್ನ ಕೇಳಿಸ್ಕೊಂಡೆ.  ಉತ್ತರಕ್ಕಿರೋ ಮೇಲಿನ ಬಾಗಿಲ+ ಕಡೆಯಿಂದ ಆರು ಗಂಡಸ್ರು ಬರೋದನ್ನ ನೋಡ್ದೆ. ಪ್ರತಿಯೊಬ್ಬನ ಕೈಯಲ್ಲಿ ಜಜ್ಜಿಹಾಕೋ ಆಯುಧ ಇತ್ತು. ಅವ್ರ ಜೊತೆ ನಾರುಬಟ್ಟೆ ಹಾಕೊಂಡಿದ್ದ ಒಬ್ಬ ವ್ಯಕ್ತಿ ಇದ್ದ. ಅವನ ಸೊಂಟದಲ್ಲಿ ಕಾರ್ಯದರ್ಶಿಯ* ಒಂದು ಶಾಯಿಕೊಂಬು* ಇತ್ತು. ಆ ಗಂಡಸ್ರೆಲ್ಲ ಬಂದು ತಾಮ್ರದ ಯಜ್ಞವೇದಿಯ+ ಪಕ್ಕ ನಿಂತ್ರು.  ಆಮೇಲೆ ಇಸ್ರಾಯೇಲಿನ ದೇವರ ಮಹಿಮೆ+ ಕೆರೂಬಿಯರ ಮೇಲಿಂದ ಎದ್ದು ಆಲಯದ ಬಾಗಿಲಿನ ಹೊಸ್ತಿಲಿಗೆ ಹೋಯ್ತು.+ ಆಗ, ನಾರುಬಟ್ಟೆ ಹಾಕಿದ್ದ ಸೊಂಟದಲ್ಲಿ ಶಾಯಿಕೊಂಬನ್ನ ಇಟ್ಕೊಂಡಿದ್ದ ಆ ವ್ಯಕ್ತಿಯನ್ನ ಆತನು ಕರೆದನು.  ಯೆಹೋವ ಅವನಿಗೆ “ನೀನು ಯೆರೂಸಲೇಮ್‌ ಪಟ್ಟಣದಲ್ಲಿ ಎಲ್ಲ ಕಡೆ ಹೋಗು. ಪಟ್ಟಣದಲ್ಲಿ ನಡಿತಿರೋ ಎಲ್ಲ ಅಸಹ್ಯ ಕೆಲಸಗಳನ್ನ+ ನೋಡಿ ದುಃಖದ ನಿಟ್ಟುಸಿರು ಬಿಡ್ತಾ ನರಳಾಡ್ತಿರೋ ಜನ್ರ ಹಣೆ ಮೇಲೆ ಒಂದು ಗುರುತು ಹಾಕು”+ ಅಂದನು.  ಆಮೇಲೆ ಆತನು ಉಳಿದವ್ರಿಗೆ “ನೀವು ಅವನ ಹಿಂದೆ ಹೋಗಿ. ಪಟ್ಟಣದಲ್ಲೆಲ್ಲ ಹೋಗಿ ಜನ್ರನ್ನ ಸಾಯಿಸಿ. ಅವ್ರನ್ನ ನೋಡಿ ಕನಿಕರಪಡಬೇಡಿ, ಅಯ್ಯೋ ಪಾಪ ಅನ್ನಬೇಡಿ.+  ವಯಸ್ಸಾದವರು, ಯುವಕರು, ಕನ್ಯೆಯರು, ಚಿಕ್ಕ ಮಕ್ಕಳು, ಹೆಂಗಸ್ರು ಅಂತ ನೋಡದೆ ಎಲ್ರನ್ನೂ ಕೊಂದು ನಾಶಮಾಡಿ.+ ಆದ್ರೆ ಹಣೆ ಮೇಲೆ ಗುರುತು ಇರೋ ಯಾರ ಹತ್ರಾನೂ ಹೋಗಬೇಡಿ.+ ಈ ಕೆಲಸವನ್ನ ನೀವು ನನ್ನ ಆಲಯದಿಂದಾನೇ ಶುರುಮಾಡಬೇಕು”+ ಅಂತ ಹೇಳೋದನ್ನ ಕೇಳಿಸ್ಕೊಂಡೆ. ಹಾಗಾಗಿ ಮೊದ್ಲು ಅವರು ಆಲಯದ ಮುಂದಿದ್ದ ಹಿರಿಯರನ್ನ ಕೊಂದ್ರು.+  ಆಮೇಲೆ ಆತನು ಅವ್ರಿಗೆ “ಹೋಗಿ! ನನ್ನ ಆಲಯವನ್ನ ಅಶುದ್ಧಮಾಡಿ, ನೀವು ಕೊಂದವ್ರ ಶವಗಳನ್ನ ಆಲಯದ ಅಂಗಳಗಳಲ್ಲಿ ಎಲ್ಲ ಕಡೆ ಹಾಕಿ”+ ಅಂದನು. ಆಗ ಅವರು ಹೋಗಿ ಪಟ್ಟಣದ ಜನ್ರನ್ನ ಕೊಂದ್ರು.  ಅವರು ಜನ್ರನ್ನ ಕೊಲ್ತಿದ್ದಾಗ ನಾನೊಬ್ಬನೇ ಜೀವಂತ ಉಳಿದೆ. ಆಗ ನಾನು ಅಡ್ಡಬಿದ್ದು “ಅಯ್ಯೋ! ವಿಶ್ವದ ರಾಜ ಯೆಹೋವನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನ ಸುರಿಯುವಾಗ ಇಸ್ರಾಯೇಲಿನಲ್ಲಿ ಉಳಿದಿರೋ ಎಲ್ರನ್ನೂ ನಾಶಮಾಡ್ತೀಯಾ?” ಅಂತ ಕೂಗಿಕೊಂಡೆ.+  ಆಗ ಆತನು ನನಗೆ “ಇಸ್ರಾಯೇಲ್‌ ಮತ್ತು ಯೆಹೂದದ ಜನ್ರ ಪಾಪಗಳಿಗೆ ಲೆಕ್ಕಾನೇ ಇಲ್ಲ.+ ದೇಶದಲ್ಲಿ ರಕ್ತಪಾತ,+ ಭ್ರಷ್ಟಾಚಾರ ತುಂಬಿ ತುಳುಕ್ತಿದೆ.+ ಆ ಜನ್ರು ‘ಯೆಹೋವ ಈ ದೇಶವನ್ನ ಬಿಟ್ಟುಬಿಟ್ಟಿದ್ದಾನೆ, ಯೆಹೋವ ಏನೂ ನೋಡ್ತಿಲ್ಲ’ ಅಂತಿದ್ದಾರೆ.+ 10  ನಾನಂತೂ ಅವ್ರನ್ನ ನೋಡಿ ಸ್ವಲ್ಪಾನೂ ಕನಿಕರಪಡಲ್ಲ, ಅಯ್ಯೋ ಪಾಪ ಅನ್ನಲ್ಲ.+ ಅವ್ರ ನಡತೆಯ ಪರಿಣಾಮಗಳನ್ನ ಅವ್ರೇ ಅನುಭವಿಸೋ ತರ ಮಾಡ್ತೀನಿ” ಅಂದನು. 11  ಆಮೇಲೆ, ನಾರುಬಟ್ಟೆ ಹಾಕೊಂಡು ಸೊಂಟದಲ್ಲಿ ಶಾಯಿಕೊಂಬನ್ನ ಇಟ್ಕೊಂಡಿದ್ದ ವ್ಯಕ್ತಿ ವಾಪಸ್‌ ಬರೋದನ್ನ ನಾನು ನೋಡ್ದೆ. “ನೀನು ಆಜ್ಞೆ ಕೊಟ್ಟ ಹಾಗೇ ನಾನು ಮಾಡಿದ್ದೀನಿ” ಅಂತ ಅವನು ಹೇಳಿದ.

ಪಾದಟಿಪ್ಪಣಿ

ಅಥವಾ “ಬರಹಗಾರನ.”
ಲೇಖನಿ ಮತ್ತು ಶಾಯಿ ಇಡೋ ಡಬ್ಬಿ.