ಯೋಹಾನ 5:1-47

  • ಬೇತ್ಸಥಾ ಕೊಳದಲ್ಲಿ ಒಬ್ಬನನ್ನ ವಾಸಿ ಮಾಡಿದನು (1-18)

  • ಯೇಸುಗೆ ಅಪ್ಪ ಅಧಿಕಾರ ಕೊಟ್ಟಿದ್ದಾನೆ (19-24)

  • ಯೇಸುವಿನ ಸ್ವರ ಕೇಳಿ ಸತ್ತವರು ಮತ್ತೆ ಬದುಕ್ತಾರೆ (25-30)

  • ಯೇಸುವನ್ನ ನಂಬೋಕೆ ಆಧಾರ (31-47)

5  ಆಮೇಲೆ ಯೆಹೂದ್ಯರ ಒಂದು ಹಬ್ಬ+ ಬಂತು. ಅದಕ್ಕೆ ಯೇಸು ಯೆರೂಸಲೇಮಿಗೆ ಹೋದನು.  ಯೆರೂಸಲೇಮಲ್ಲಿದ್ದ ‘ಕುರಿಬಾಗಿಲ’+ ಹತ್ರ ಒಂದು ಕೊಳ ಇತ್ತು. ಹೀಬ್ರು ಭಾಷೆಯಲ್ಲಿ ಅದ್ರ ಹೆಸರು ಬೇತ್ಸಥಾ. ಅದ್ರ ಒಳಗೆ ಹೋಗೋಕೆ ಐದು ದಾರಿ ಇತ್ತು. ಆ ದಾರಿಗಳಲ್ಲಿ ಮಂಟಪ ಹಾಕಿದ್ರು.  ಅಲ್ಲಿ ಕಾಯಿಲೆ ಇದ್ದವರು, ಕುರುಡರು, ಕುಂಟರು, ಅಂಗವಿಕಲರು ಹೀಗೆ ತುಂಬ ಜನ ಇರ್ತಿದ್ರು.  *——  ಅಲ್ಲಿ ಒಬ್ಬ ರೋಗಿ ಇದ್ದ, ಅವನಿಗೆ 38 ವರ್ಷದಿಂದ ಹುಷಾರಿರಲಿಲ್ಲ.  ಅವನು ಅಲ್ಲಿ ಮಲಗಿರೋದನ್ನ ಯೇಸು ನೋಡಿದನು. ಅವನು ತುಂಬ ವರ್ಷದಿಂದ ನರಳ್ತಾ ಇದ್ದಾನೆ ಅಂತ ಯೇಸುಗೆ ಗೊತ್ತಿತ್ತು. ಯೇಸು ಅವನಿಗೆ “ನಿನಗೆ ವಾಸಿ ಆಗಬೇಕಾ?”+ ಅಂತ ಕೇಳಿದನು.  ಅದಕ್ಕೆ ಅವನು “ಸ್ವಾಮಿ, ನನ್ನನ್ನ ನೀರಲ್ಲಿ ಇಳಿಸೋಕೆ ಯಾರೂ ಇಲ್ಲ. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಇನ್ನೊಬ್ಬರು ಹೋಗಿಬಿಡ್ತಾರೆ” ಅಂದ.  ಯೇಸು ಅವನಿಗೆ “ಎದ್ದೇಳು, ನಿನ್ನ ಚಾಪೆ* ಎತ್ಕೊಂಡು ನಡಿ”+ ಅಂದನು.  ತಕ್ಷಣ ಅವನಿಗೆ ವಾಸಿ ಆಯ್ತು. ಅವನು ಹುಷಾರಾಗಿ ಚಾಪೆ ಎತ್ಕೊಂಡು ನಡಿಯೋಕೆ ಶುರುಮಾಡಿದ. ಅದು ಸಬ್ಬತ್‌ ದಿನ. 10  ಹಾಗಾಗಿ ವಾಸಿಯಾದ ಆ ವ್ಯಕ್ತಿಗೆ ಯೆಹೂದ್ಯರು “ಇವತ್ತು ಸಬ್ಬತ್‌ ದಿನ. ನೀನು ಚಾಪೆ ಎತ್ಕೊಂಡು ಹೋಗೋದು ತಪ್ಪು” ಅಂದ್ರು.+ 11  ಅದಕ್ಕೆ “‘ನಿನ್ನ ಚಾಪೆ ಎತ್ಕೊಂಡು ನಡಿ’ ಅಂತ ನನ್ನನ್ನ ವಾಸಿ ಮಾಡಿದವನೇ ಹೇಳಿದನು” ಅಂದ. 12  ಅವರು “ಯಾರವನು?” ಅಂತ ಕೇಳಿದ್ರು. 13  ಆದ್ರೆ ವಾಸಿಮಾಡಿದ್ದು ಯಾರು ಅಂತ ಅವನಿಗೆ ಗೊತ್ತಾಗಲಿಲ್ಲ. ಯಾಕಂದ್ರೆ ಯೇಸು ಜನ್ರ ಗುಂಪಲ್ಲಿ ಸೇರ್ಕೊಂಡಿದ್ದನು. 14  ಆಮೇಲೆ ಯೇಸು ಆ ವ್ಯಕ್ತಿಯನ್ನ ದೇವಾಲಯದಲ್ಲಿ ನೋಡಿದನು. ಯೇಸು “ನೋಡು, ಈಗ ನಿನಗೆ ವಾಸಿಯಾಗಿದೆ. ಇನ್ನು ಮುಂದೆ ಪಾಪಮಾಡಬೇಡ. ಮಾಡಿದ್ರೆ ಇದಕ್ಕಿಂತ ಜಾಸ್ತಿ ಕಷ್ಟ ಪಡಬೇಕಾಗುತ್ತೆ” ಅಂದನು. 15  ಅವನು ಹೋಗಿ ತನ್ನನ್ನ ವಾಸಿಮಾಡಿದ್ದು ಯೇಸುನೇ ಅಂತ ಯೆಹೂದ್ಯರಿಗೆ ಹೇಳಿದ. 16  ಇದ್ರಿಂದ ಅವರು ಯೇಸುವನ್ನ ಇನ್ನೂ ಜಾಸ್ತಿ ಸತಾಯಿಸೋಕೆ ಶುರುಮಾಡಿದ್ರು. ಯಾಕಂದ್ರೆ ಯೇಸು ಸಬ್ಬತ್‌ ದಿನದಲ್ಲಿ ಕಾಯಿಲೆ ವಾಸಿಮಾಡ್ತಿದ್ದನು. 17  ಯೇಸು ಅವ್ರಿಗೆ “ನನ್ನ ಅಪ್ಪ ಇವತ್ತಿಗೂ ಕೆಲಸಮಾಡ್ತಾ ಇದ್ದಾನೆ. ನಾನೂ ಕೆಲಸಮಾಡ್ತಾ ಇದ್ದೀನಿ” ಅಂದ.+ 18  ಅವತ್ತಿಂದ ಅವರು ಯೇಸುನ ಕೊಲ್ಲೋಕೆ ಇನ್ನೂ ಜಾಸ್ತಿ ಅವಕಾಶಗಳಿಗಾಗಿ ಹುಡುಕ್ತಾನೇ ಇದ್ರು. ಯಾಕಂದ್ರೆ ಯೇಸು ಸಬ್ಬತ್‌ ನಿಯಮವನ್ನ ಮುರಿದದ್ದಷ್ಟೇ ಅಲ್ಲ, ದೇವರನ್ನ ತನ್ನ ಸ್ವಂತ ಅಪ್ಪ+ ಅಂತ ಕರೆದು ತಾನು ದೇವರಿಗೆ ಸಮ+ ಅಂತ ತೋರಿಸ್ತಾ ಇದ್ದಾನೆ ಅಂದ್ಕೊಂಡ್ರು. 19  ಹಾಗಾಗಿ ಯೇಸು ಹೀಗಂದನು “ಮಗ ತನ್ನಿಷ್ಟಕ್ಕೆ ತಾನೇ ಏನೂ ಮಾಡಲ್ಲ. ಅಪ್ಪ ಯಾವ ಕೆಲಸಗಳನ್ನ ಮಾಡ್ತಾನೆ ಅಂತ ಮಗ ನೋಡ್ತಾನೆ, ಅದನ್ನೇ ಮಾಡ್ತಾನೆ.+ ಅಪ್ಪ ಮಾಡೋ ತರಾನೇ ಮಗ ಮಾಡ್ತಾನೆ. 20  ಅಪ್ಪ ಮಗನನ್ನ ತುಂಬ ಪ್ರೀತಿಸ್ತಾನೆ.+ ಅಷ್ಟೇ ಅಲ್ಲ ತಾನು ಮಾಡೋ ಎಲ್ಲ ಕೆಲಸವನ್ನೂ ಮಗನಿಗೆ ತೋರಿಸ್ತಾನೆ. ಇದಕ್ಕಿಂತ ದೊಡ್ಡದೊಡ್ಡ ಕೆಲಸಗಳನ್ನ ಕೂಡ ಮಗನಿಗೆ ತೋರಿಸ್ತಾನೆ. ನೀವು ಆಶ್ಚರ್ಯ ಪಡಬೇಕಂತಾನೇ+ ಇದನ್ನೆಲ್ಲ ಮಾಡ್ತಾನೆ. 21  ಅಪ್ಪ ಹೇಗೆ ಸತ್ತವ್ರಿಗೆ ಜೀವ ಕೊಡ್ತಾನೋ+ ಅದೇ ತರ ಮಗ ಸಹ ತನಗೆ ಇಷ್ಟ ಬಂದವ್ರಿಗೆ ಜೀವ ಕೊಡ್ತಾನೆ.+ 22  ಅಪ್ಪ ಯಾರಿಗೂ ಶಿಕ್ಷೆ ಕೊಡಲ್ಲ. ಆ ಅಧಿಕಾರ ಮಗನಿಗೆ ಕೊಟ್ಟಿದ್ದಾನೆ.+ 23  ಯಾಕಂದ್ರೆ ಎಲ್ರೂ ಅಪ್ಪನನ್ನ ಗೌರವಿಸೋ ತರ ಮಗನನ್ನೂ ಗೌರವಿಸಬೇಕಂತ ಹೀಗೆ ಮಾಡಿದ್ದಾನೆ. ಮಗನಿಗೆ ಗೌರವ ಕೊಡದೇ ಇರೋರು ಆತನನ್ನ ಕಳಿಸಿದ ಅಪ್ಪನಿಗೂ ಗೌರವ ಕೊಡಲ್ಲ.+ 24  ನೆನಪಿಡಿ, ನನ್ನ ಮಾತು ಕೇಳಿ ನನ್ನನ್ನ ಕಳಿಸಿದ ಅಪ್ಪನನ್ನ ನಂಬೋ ಪ್ರತಿಯೊಬ್ಬನಿಗೂ ಶಾಶ್ವತ ಜೀವ ಸಿಗುತ್ತೆ.+ ಅವನಿಗೆ ಶಿಕ್ಷೆ ಸಿಗಲ್ಲ. ಅವನು ಸಾವಿಂದ ಪಾರಾಗಿ ಜೀವ ಪಡ್ಕೊಳ್ತಾನೆ.+ 25  ನಿಮಗೆ ನಿಜ ಹೇಳ್ತೀನಿ, ಸತ್ತವರು ದೇವರ ಮಗನ ಸ್ವರ ಕೇಳೋ ಸಮಯ ಬರುತ್ತೆ, ಅದು ಈಗಾಗಲೇ ಶುರುವಾಗಿದೆ. ಆತನು ಹೇಳೋದನ್ನ ಕೇಳಿಸ್ಕೊಂಡು ಪಾಲಿಸೋರು ಬದುಕ್ತಾರೆ. 26  ಜೀವ ಕೊಡೋ ಶಕ್ತಿ ಅಪ್ಪನಿಗಿದೆ.+ ಆ ಶಕ್ತಿಯನ್ನ ಮಗನಿಗೂ ಕೊಟ್ಟಿದ್ದಾನೆ.+ 27  ಅಷ್ಟೇ ಅಲ್ಲ ಆ ಮಗ ಮನುಷ್ಯಕುಮಾರ+ ಆಗಿರೋದ್ರಿಂದ ಆತನಿಗೆ ಅಪ್ಪ ನ್ಯಾಯತೀರ್ಪು ಮಾಡೋ ಅಧಿಕಾರ ಕೊಟ್ಟಿದ್ದಾನೆ.+ 28  ನಾನು ಹೇಳೋದನ್ನ ಕೇಳಿ ಆಶ್ಚರ್ಯ ಪಡಬೇಡಿ. ಒಂದು ಸಮಯ ಬರುತ್ತೆ, ಆಗ ಸಮಾಧಿಗಳಲ್ಲಿ* ಇರೋರೆಲ್ಲ ಆತನ ಸ್ವರ ಕೇಳಿ+ 29  ಜೀವಂತ ಎದ್ದು ಬರ್ತಾರೆ. ಒಳ್ಳೇ ಕೆಲಸ ಮಾಡಿದವರು ಜೀವ ಪಡ್ಕೊಳ್ಳೋಕೆ ಎದ್ದು ಬರ್ತಾರೆ, ಕೆಟ್ಟ ಕೆಲಸ ಮಾಡ್ತಾ ಇದ್ದವರು ನ್ಯಾಯತೀರ್ಪಿಗಾಗಿ+ ಎದ್ದು ಬರ್ತಾರೆ. 30  ನನ್ನಿಷ್ಟ ಬಂದ ಹಾಗೆ ನಾನು ಏನೂ ಮಾಡಲ್ಲ, ತಂದೆ ಹೇಳೋ ತರ ಶಿಕ್ಷೆ ಕೊಡ್ತೀನಿ. ನಾನು ನ್ಯಾಯವಾದ ಶಿಕ್ಷೆನೇ+ ಕೊಡ್ತೀನಿ. ಯಾಕಂದ್ರೆ ನನ್ನಿಷ್ಟ ಅಲ್ಲ, ನನ್ನನ್ನ ಕಳಿಸಿದ ಅಪ್ಪನ ಇಷ್ಟ+ ಮಾಡಬೇಕು ಅನ್ನೋದು ನನ್ನಾಸೆ. 31  ಜನ್ರ ಹತ್ರ ನಾನೇ ನನ್ನ ಬಗ್ಗೆ ಹೇಳ್ಕೊಂಡ್ರೆ ಅದನ್ನ ಅವರು ನಂಬಲ್ಲ.+ 32  ನನ್ನ ಬಗ್ಗೆ ಜನ್ರಿಗೆ ಹೇಳೋಕೆ ಇನ್ನೊಬ್ಬ ಇದ್ದಾನೆ. ಆತನು ನನ್ನ ಬಗ್ಗೆ ಸತ್ಯಾನೇ ಹೇಳ್ತಾನೆ ಅಂತ ನಂಗೊತ್ತು.+ 33  ನೀವು ಯೋಹಾನನ ಹತ್ರ ಜನ್ರನ್ನ ಕಳಿಸಿದ್ರಿ, ಅವನೂ ಸತ್ಯಾನೇ ಹೇಳಿದ.+ 34  ಜನ್ರ ಹತ್ರ ನನ್ನ ಬಗ್ಗೆ ಮಾತಾಡೋಕೆ ಯಾವ ಮನುಷ್ಯನ ಅವಶ್ಯಕತೆಯೂ ನನಗಿಲ್ಲ. ಆದ್ರೂ ನಿಮಗೆ ರಕ್ಷಣೆ ಸಿಗಲಿ ಅಂತ ಈ ವಿಷ್ಯಗಳನ್ನ ಹೇಳ್ತಾ ಇದ್ದೀನಿ. 35  ಯೋಹಾನ ಉರಿಯೋ ಪ್ರಕಾಶಿಸೋ ದೀಪದ ತರ ಇದ್ದ. ನೀವು ಸ್ವಲ್ಪ ಸಮಯ ಅವನ ಬೆಳಕಲ್ಲಿ ಖುಷಿಯಾಗಿ ಇರೋಕೆ+ ಇಷ್ಟಪಟ್ರಿ. 36  ನನ್ನನ್ನ ಅಪ್ಪ ಕಳಿಸಿದ್ದಾನೆ ಅಂತ ಯೋಹಾನ ಜನ್ರಿಗೆ ಹೇಳಿದ. ಆದ್ರೆ ನನ್ನ ಹತ್ರ ಅದಕ್ಕಿಂತ ಬಲವಾದ ಇನ್ನೊಂದು ಸಾಕ್ಷಿ ಇದೆ. ಅದೇನಂದ್ರೆ ಅಪ್ಪ ನನಗೆ ಕೊಟ್ಟಿರೋ ಕೆಲಸಗಳನ್ನೇ ನಾನು ಮಾಡ್ತಾ ಇದ್ದೀನಿ.+ 37  ಅಷ್ಟೇ ಅಲ್ಲ ನನ್ನನ್ನ ಕಳಿಸಿದ ನನ್ನ ಅಪ್ಪಾನೇ ನನ್ನ ಬಗ್ಗೆ ಹೇಳಿದ್ದಾನೆ.+ ಆದ್ರೆ ನೀವು ಯಾವತ್ತೂ ಆತನ ಸ್ವರ ಕೇಳಿಸ್ಕೊಳ್ಳಲಿಲ್ಲ. ಆತನ ಮುಖ ನೋಡಲಿಲ್ಲ.+ 38  ಆತನ ಮಾತು ನಿಮ್ಮ ಹೃದಯದಲ್ಲಿಲ್ಲ. ಯಾಕಂದ್ರೆ ನೀವು ಆತನು ಕಳಿಸಿದ ವ್ಯಕ್ತಿಯನ್ನ ನಂಬಲಿಲ್ಲ. 39  ಶಾಶ್ವತ ಜೀವ ಸಿಗಬೇಕಂದ್ರೆ ಏನು ಮಾಡಬೇಕು ಅಂತ ಪವಿತ್ರ ಗ್ರಂಥದಲ್ಲಿ ಚೆನ್ನಾಗಿ ಹುಡುಕ್ತೀರ.+ ಆ ಪವಿತ್ರ ಗ್ರಂಥದಲ್ಲೇ ನನ್ನ ಬಗ್ಗೆ ಇದ್ಯಲ್ಲಾ!+ 40  ಆದ್ರೂ ಶಾಶ್ವತ ಜೀವ ಪಡ್ಕೊಳ್ಳೋಕೆ ನನ್ನ ಹತ್ರ+ ಬರೋಕೆ ನಿಮಗಿಷ್ಟ ಇಲ್ಲ. 41  ಮನುಷ್ಯರು ಕೊಡೋ ಹೊಗಳಿಕೆ ನನಗೆ ಬೇಡ. 42  ನಿಮಗೆ ದೇವರ ಮೇಲೆ ಪ್ರೀತಿ ಇಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. 43  ನನಗೆ ಅಧಿಕಾರ ಕೊಟ್ಟು ಅಪ್ಪಾನೇ ನನ್ನನ್ನ ಕಳಿಸಿದ. ಆದ್ರೆ ನೀವು ನನ್ನನ್ನ ನಂಬ್ತಿಲ್ಲ. ಅದೇ ಬೇರೆ ಯಾರಾದ್ರೂ ತನ್ನಷ್ಟಕ್ಕೆ ತಾನೇ ಬಂದಿದ್ರೆ ನೀವು ಅವನನ್ನ ನಂಬ್ತಿದ್ರಿ. 44  ಬೇರೆಯವರನ್ನ ಹೊಗಳೋದು, ಅವ್ರಿಂದ ಹೊಗಳಿಸ್ಕೊಳ್ಳೋದು ಅಂದ್ರೆ ನಿಮಗೆ ತುಂಬ ಇಷ್ಟ. ಆದ್ರೆ ಒಬ್ಬನೇ ದೇವರಿಂದ ಸಿಗೋ ಹೊಗಳಿಕೆ ಮಾತ್ರ ನಿಮಗೆ ಬೇಡ. ಹಾಗಿರುವಾಗ ನೀವು ನನ್ನನ್ನ ಹೇಗೆ ನಂಬ್ತೀರಾ?+ 45  ಅಪ್ಪನ ಮುಂದೆ ನಾನು ನಿಮ್ಮ ಬಗ್ಗೆ ತಪ್ಪುಗಳನ್ನ ಹುಡುಕ್ತೀನಿ ಅಂತ ನೆನಸಬೇಡಿ. ಮೋಶೆ+ ನಿಮ್ಮನ್ನ ಕಾಪಾಡ್ತಾನೆ ಅಂತ ಅಂದ್ಕೊಂಡಿದ್ದೀರ. ಆದ್ರೆ ಅವನು ಬರೆದ ಮಾತುಗಳೇ ನೀವು ತಪ್ಪು ಮಾಡಿದ್ದೀರಾ ಅಂತ ಹೇಳುತ್ತೆ. 46  ನೀವು ಮೋಶೆಯನ್ನ ನಂಬಿದ್ರೆ ನನ್ನನ್ನೂ ನಂಬ್ತಿದ್ರಿ. ಯಾಕಂದ್ರೆ ಅವನು ನನ್ನ ಬಗ್ಗೆ ಬರೆದಿದ್ದಾನೆ.+ 47  ಅವನ ಮಾತುಗಳನ್ನೇ ನೀವು ನಂಬಿಲ್ಲಾಂದ್ರೆ ನನ್ನ ಮಾತುಗಳನ್ನ ಹೇಗೆ ನಂಬ್ತೀರಾ?”

ಪಾದಟಿಪ್ಪಣಿ

ಅಥವಾ “ಹಾಸಿಗೆ.”
ಅಥವಾ “ಸ್ಮರಣೆಯ ಸಮಾಧಿಗಳಲ್ಲಿ.”