ಎರಡನೇ ಅರಸು 19:1-37

  • ಹಿಜ್ಕೀಯ ಯೆಶಾಯನ ಮೂಲಕ ದೇವರ ಸಹಾಯ ಪಡ್ಕೊಳ್ತಾನೆ (1-7)

  • ಸನ್ಹೇರೀಬ ಯೆರೂಸಲೇಮನ್ನ ಗದರಿಸ್ತಾನೆ (8-13)

  • ಹಿಜ್ಕೀಯನ ಪ್ರಾರ್ಥನೆ (14-19)

  • ಯೆಶಾಯ ದೇವರ ಉತ್ತರ ತಿಳಿಸ್ತಾನೆ (20-34)

  • 1,85,000 ಅಶ್ಶೂರ್ಯರನ್ನ ದೇವದೂತ ಕೊಲ್ತಾನೆ (35-37)

19  ಆ ಮಾತುಗಳನ್ನ ಕೇಳಿದ ತಕ್ಷಣ ರಾಜ ಹಿಜ್ಕೀಯ ಬಟ್ಟೆ ಹರ್ಕೊಂಡು ಗೋಣಿ ಕಟ್ಕೊಂಡು ಯೆಹೋವನ ಆಲಯಕ್ಕೆ ಹೋದ.+  ಅರಮನೆ ನೋಡ್ಕೊಳ್ತಿದ್ದ ಎಲ್ಯಕೀಮನನ್ನ, ಕಾರ್ಯದರ್ಶಿ ಶೆಬ್ನನನ್ನ, ಪುರೋಹಿತರಲ್ಲಿದ್ದ ಹಿರಿಯರನ್ನ ಹಿಜ್ಕೀಯ ಪ್ರವಾದಿಯಾದ ಆಮೋಚನ ಮಗ ಯೆಶಾಯನ+ ಹತ್ರ ಕಳಿಸಿದ. ಅವರು ಗೋಣಿ ಕಟ್ಕೊಂಡು ಅವನ ಹತ್ರ ಹೋದ್ರು.  ಅವರು ಯೆಶಾಯನಿಗೆ “ಹಿಜ್ಕೀಯ ಹೀಗೆ ಹೇಳ್ತಿದ್ದಾನೆ: ‘ಈ ದಿನ ತುಂಬ ಕಷ್ಟದ ದಿನ. ಅವಮಾನ ಮತ್ತು ಕಳಂಕದ ದಿನ. ನಮ್ಮ ಪರಿಸ್ಥಿತಿ, ಹೆರೋ ಕಾಲವಾಗಿದ್ರೂ ಹೆರೋಕೆ ಶಕ್ತಿಯಿಲ್ಲದ ಗರ್ಭಿಣಿ ಸ್ತ್ರೀ ತರ ಇದೆ.+  ಜೀವ ಇರೋ ದೇವರನ್ನ ಅವಮಾನಿಸೋಕೆ ಅಶ್ಶೂರ್ಯರ ರಾಜ ಕಳಿಸಿದ ರಬ್ಷಾಕೆಯ ಮಾತನ್ನೆಲ್ಲ ನಿನ್ನ ದೇವರಾದ ಯೆಹೋವ ಖಂಡಿತ ಕೇಳಿರಬಹುದು.+ ನಿನ್ನ ದೇವರಾದ ಯೆಹೋವ ಕೇಳಿಸ್ಕೊಂಡ ಮಾತುಗಳಿಗೆ ತಕ್ಕಂತೆ ಅವನನ್ನ ಶಿಕ್ಷಿಸಬಹುದು. ಹಾಗಾಗಿ ದೇಶದಲ್ಲಿ ಉಳಿದಿರೋ ಜನ್ರಿಗೋಸ್ಕರ ದಯವಿಟ್ಟು ಪ್ರಾರ್ಥನೆ ಮಾಡು’”+ ಅಂತ ಹೇಳಿದ್ರು.  ರಾಜ ಹಿಜ್ಕೀಯನ ಈ ಸಂದೇಶವನ್ನ ಅವರು ಯೆಶಾಯನಿಗೆ ಹೇಳಿದಾಗ+  ಯೆಶಾಯ “ನೀವು ನಿಮ್ಮ ಒಡೆಯನಿಗೆ ಹೀಗೆ ಹೇಳಿ ‘ಯೆಹೋವ ಹೀಗೆ ಹೇಳ್ತಾನೆ: “ಅಶ್ಶೂರ್ಯರ ರಾಜನ ಸೇವಕರು ನನಗೆ ಅವಮಾನ ಮಾಡಿ ಹೇಳಿರೋ ಮಾತುಗಳನ್ನ+ ಕೇಳಿಸ್ಕೊಂಡು ನೀನು ಹೆದರಬೇಡ.+  ನಾನು ಅವನ ಮನಸ್ಸಲ್ಲಿ ಒಂದು ಯೋಚ್ನೆ ಹುಟ್ಟಿಸ್ತೀನಿ. ಅವನು ಒಂದು ಸುದ್ದಿ ಕೇಳಿ ತನ್ನ ದೇಶಕ್ಕೆ ವಾಪಸ್‌ ಹೋಗೋ ಹಾಗೆ ಮಾಡ್ತೀನಿ. ಅವನು ಅಲ್ಲೇ ಕತ್ತಿಯಿಂದ ಸಾಯೋ ತರ ಮಾಡ್ತೀನಿ”’”+ ಅಂದ.  ಅಶ್ಶೂರ್ಯರ ರಾಜ ಲಾಕೀಷನ್ನ+ ಬಿಟ್ಟು ಹೋದ ಅನ್ನೋ ಸುದ್ದಿ ರಬ್ಷಾಕೆಗೆ ಸಿಕ್ತು. ಹಾಗಾಗಿ ಅವನು ತನ್ನ ರಾಜನ ಹತ್ರ ವಾಪಸ್‌ ಹೋದ. ಆಗ ರಾಜ ಲಿಬ್ನದ ವಿರುದ್ಧ ಯುದ್ಧ ಮಾಡ್ತಿದ್ದ.+  ಇಥಿಯೋಪ್ಯದ ರಾಜ ತಿರ್ಹಾಕ ತನ್ನ ವಿರುದ್ಧ ಯುದ್ಧ ಮಾಡೋಕೆ ಬಂದಿದ್ದಾನೆ ಅನ್ನೋ ವಿಷ್ಯ ಅಶ್ಶೂರ್ಯರ ರಾಜನ ಕಿವಿಗೆ ಬಿತ್ತು. ಆಗ ಅವನು ತನ್ನ ಸಂದೇಶವಾಹಕರಿಗೆ+ ಹೀಗೆ ಹೇಳಿ ರಾಜ ಹಿಜ್ಕೀಯನ ಹತ್ರ ಕಳಿಸಿದ: 10  “ನೀವು ಯೆಹೂದದ ರಾಜ ಹಿಜ್ಕೀಯನ ಹತ್ರ ಹೋಗಿ ಹೀಗೆ ಹೇಳಿ ‘ನೀನು ನಂಬಿರೋ ದೇವರು “ಯೆರೂಸಲೇಮನ್ನ ಅಶ್ಶೂರ್ಯರ ರಾಜನ ಕೈಗೆ ಒಪ್ಪಿಸಲ್ಲ” ಅಂತ ಹೇಳಿ ನಿನಗೆ ಮೋಸ ಮಾಡ್ತಿದ್ದಾನೆ. ಆದ್ರೆ ನೀನು ಮೋಸ ಹೋಗಬೇಡ.+ 11  ಅಶ್ಶೂರ್ಯರ ರಾಜರ ಕೈಯಲ್ಲಿ ಬೇರೆ ದೇಶಗಳು ಹೇಗೆ ಸರ್ವನಾಶ ಆದ್ವು+ ಅಂತ ನಿನಗೆ ಚೆನ್ನಾಗಿ ಗೊತ್ತು. ಹಾಗಿದ್ದ ಮೇಲೆ ನೀನು ನನ್ನ ಕೈಯಿಂದ ತಪ್ಪಿಸ್ಕೊಳ್ತೀಯ ಅಂತ ಹೇಗೆ ಅಂದ್ಕೊಂಡೆ? 12  ನನ್ನ ಪೂರ್ವಜರು ನಾಶಮಾಡಿದ ದೇಶಗಳ ದೇವರುಗಳಿಗೆ ಆ ದೇಶಗಳ ಜನ್ರನ್ನ ರಕ್ಷಿಸೋಕಾಯ್ತಾ? ಗೋಜಾನ್‌, ಖಾರಾನ್‌,+ ರೆಚೆಫ್‌ ಮತ್ತು ತೆಲಸ್ಸಾರಿನಲ್ಲಿದ್ದ ಎದೆನಿನ ಜನ ಈಗ ಎಲ್ಲಿದ್ದಾರೆ? 13  ಹಾಮಾತಿನ ರಾಜ, ಅರ್ಪಾದಿನ, ಸೆಫರ್ವಯಿಮ್‌, ಹೇನ ಮತ್ತು ಇವ್ವಾ+ ಅನ್ನೋ ಪಟ್ಟಣಗಳ ರಾಜರು ಈಗ ಎಲ್ಲಿ?’” 14  ಹಿಜ್ಕೀಯ, ಸಂದೇಶವಾಹಕರು ತಂದ ಪತ್ರಗಳನ್ನ ತಗೊಂಡು ಓದಿದ. ಆಮೇಲೆ ಅವನು ಯೆಹೋವನ ಆಲಯಕ್ಕೆ ಹೋಗಿ ಅವುಗಳನ್ನ ಯೆಹೋವನ ಮುಂದೆ ತೆರೆದಿಟ್ಟು+ 15  ಯೆಹೋವನಿಗೆ ಹೀಗೆ ಪ್ರಾರ್ಥಿಸಿದ:+ “ಕೆರೂಬಿಗಳ+ ಮೇಲೆ* ಕೂತಿರೋ ಇಸ್ರಾಯೇಲ್‌ ದೇವರಾದ ಯೆಹೋವನೇ, ಭೂಮಿ ಮೇಲಿರೋ ಸಕಲ ರಾಜ್ಯಗಳಿಗೆ ಸತ್ಯ ದೇವರು ನೀನೊಬ್ಬನೇ.+ ಆಕಾಶವನ್ನೂ ಭೂಮಿಯನ್ನೂ ಸೃಷ್ಟಿ ಮಾಡಿದವನು ನೀನೇ. 16  ಯೆಹೋವನೇ, ಕಿವಿಗೊಟ್ಟು ಕೇಳು!+ ಯೆಹೋವನೇ, ಕಣ್ತೆರೆದು+ ನೋಡು! ಜೀವ ಇರೋ ದೇವರಾದ ನಿನ್ನನ್ನ ಹಂಗಿಸೋಕೆ ಸನ್ಹೇರೀಬ ಹೇಳಿ ಕಳಿಸಿದ ಮಾತುಗಳನ್ನ ದಯವಿಟ್ಟು ಕೇಳಿಸ್ಕೊ. 17  ಯೆಹೋವನೇ, ಅಶ್ಶೂರ್ಯರ ರಾಜ ತುಂಬ ಜನಾಂಗಗಳನ್ನ, ಅವ್ರ ದೇಶಗಳನ್ನ ನಾಶ ಮಾಡಿರೋದು ನಿಜ.+ 18  ಅವರು ಆ ದೇಶದ ದೇವರುಗಳನ್ನ ಬೆಂಕಿಗೆ ಹಾಕಿದ್ರು. ಯಾಕಂದ್ರೆ ಅವು ದೇವರಲ್ಲ.+ ಕಟ್ಟಿಗೆಯಿಂದ, ಕಲ್ಲಿಂದ ಮಾಡಿದ ಮನುಷ್ಯರ ಕೈಕೆಲಸ ಅಷ್ಟೇ.+ ಅದಕ್ಕೆ ಆ ದೇವರುಗಳನ್ನ ನಾಶ ಮಾಡೋಕಾಯ್ತು. 19  ಹಾಗಾಗಿ ನಮ್ಮ ದೇವರಾದ ಯೆಹೋವನೇ, ದಯವಿಟ್ಟು ಅವನ ಕೈಯಿಂದ ನಮ್ಮನ್ನ ರಕ್ಷಿಸು. ಆಗ ಯೆಹೋವನೇ, ಭೂಮಿ ಮೇಲಿರೋ ಸಕಲ ರಾಜ್ಯಗಳಿಗೆ ನೀನೊಬ್ಬನೇ ದೇವರಂತ ಗೊತ್ತಾಗುತ್ತೆ.”+ 20  ಆಗ ಆಮೋಚನ ಮಗ ಯೆಶಾಯ ಹಿಜ್ಕೀಯನಿಗೆ ಈ ಸಂದೇಶ ಕಳಿಸಿದ: “ಇಸ್ರಾಯೇಲ್‌ ದೇವರಾದ ಯೆಹೋವ ಹೀಗೆ ಹೇಳ್ತಾನೆ ‘ಅಶ್ಶೂರ್ಯರ ರಾಜ ಸನ್ಹೇರೀಬನ ವಿಷ್ಯವಾಗಿ ನೀನು ಮಾಡಿದ ಪ್ರಾರ್ಥನೆಯನ್ನ+ ನಾನು ಕೇಳಿಸ್ಕೊಂಡಿದ್ದೀನಿ.+ 21  ಯೆಹೋವ ಸನ್ಹೇರೀಬನ ವಿರುದ್ಧ ಹೇಳಿದ ಮಾತುಗಳು ಹೀಗಿವೆ: “ಕನ್ಯೆಯಾಗಿರೋ ಚೀಯೋನಿನ ಮಗಳು ನಿನ್ನನ್ನ ತುಚ್ಛವಾಗಿ ಕಾಣ್ತಾಳೆ, ನಿನ್ನನ್ನ ಅಣಕಿಸ್ತಾಳೆ. ಯೆರೂಸಲೇಮಿನ ಮಗಳು ನಿನ್ನನ್ನ ನೋಡಿ ತಲೆ ಆಡಿಸ್ತಾ ನಗ್ತಾಳೆ. 22  ನೀನು ಕೆಣಕಿದ್ದು, ಅವಮಾನ ಮಾಡಿದ್ದು ಯಾರನ್ನ ಅಂತ ಗೊತ್ತಾ?+ ನೀನು ನಿನ್ನ ಧ್ವನಿ ಎತ್ತಿದ್ದು ಯಾರ ವಿರುದ್ಧ ಅಂತ ಗೊತ್ತಾ?+ ನೀನು ಸೊಕ್ಕಿಂದ ನೋಡಿದ್ದು ಯಾರನ್ನ ಅಂತ ಗೊತ್ತಾ? ಇಸ್ರಾಯೇಲ್ಯರ ಪವಿತ್ರ ದೇವರನ್ನ!+ 23  ನಿನ್ನ ಸಂದೇಶವಾಹಕರ ಮೂಲಕ+ ನೀನು ಯೆಹೋವನನ್ನ ಕೆಣಕಿ+ ಹೀಗಂದೆ: ‘ನನ್ನ ಅಸಂಖ್ಯ ಯುದ್ಧರಥಗಳಿಂದನಾನು ಬೆಟ್ಟಗಳನ್ನ ಹತ್ತುತ್ತೀನಿ,ಲೆಬನೋನಿನ ದೂರದ ಪ್ರದೇಶಗಳ ತನಕ ತಲುಪ್ತೀನಿ. ಎತ್ತರವಾದ ದೇವದಾರು ವೃಕ್ಷಗಳನ್ನೂ ಶ್ರೇಷ್ಠವಾದ ಜುನಿಪರ್‌ ಮರಗಳನ್ನೂ ಕಡಿದು ಹಾಕ್ತೀನಿ. ನಾನು ಅದ್ರ ದೂರದ ಸ್ಥಳಗಳಿಗೆ, ದಟ್ಟ ಕಾಡುಗಳಿಗೆ ಕಾಲಿಡ್ತೀನಿ. 24  ನಾನು ಬೇರೆ ದೇಶಗಳಲ್ಲಿ ಬಾವಿಗಳನ್ನ ತೋಡಿ ಅಲ್ಲಿನ ನೀರು ಕುಡಿತೀನಿ,ನನ್ನ ಪಾದಗಳಿಂದ ಈಜಿಪ್ಟಿನ ಎಲ್ಲ ತೊರೆಗಳನ್ನ* ಬತ್ತಿಸಿ ಬಿಡ್ತೀನಿ.’ 25  ನೀನು ಕೇಳಿಸ್ಕೊಂಡಿಲ್ವಾ? ನಾನು ಇದನ್ನ ತುಂಬ ಹಿಂದೆನೇ ತೀರ್ಮಾನ ಮಾಡಿದ್ದೆ.+ ತುಂಬ ವರ್ಷ ಮುಂಚೆನೇ ಇದಕ್ಕಾಗಿ ತಯಾರಿ ಮಾಡಿದ್ದೆ.*+ ಅದನ್ನ ಮಾಡೋ ಸಮಯ ಈಗ ಬಂದಿದೆ.+ ನೀನು ಭದ್ರ ಕೋಟೆಗಳಿರೋ ಪಟ್ಟಣಗಳನ್ನ ಹಾಳುದಿಬ್ಬಗಳಾಗಿ ಮಾಡ್ತೀಯ.+ 26  ಅದ್ರ ಜನ್ರು ನಿಸ್ಸಹಾಯಕರಾಗ್ತಾರೆ,ಅವರು ಹೆದರಿ ನಾಚಿ ತಲೆತಗ್ಗಿಸ್ತಾರೆ. ಅವರು ಹೊಲದ ತರಕಾರಿಗಳ ತರ, ಹುಲ್ಲುಕಡ್ಡಿ ತರ ಬಲಹೀನರಾಗ್ತಾರೆ,+ಪೂರ್ವದಿಂದ ಬೀಸೋ ಬಿಸಿಗಾಳಿಗೆ ಒಣಗಿಹೋಗೋ ಚಾವಣಿ ಮೇಲಿನ ಹುಲ್ಲಿನ ತರ ಆಗ್ತಾರೆ. 27  ನೀನು ಯಾವಾಗ ಕೂರ್ತೀಯ, ಯಾವಾಗ ಹೋಗ್ತೀಯ, ಯಾವಾಗ ಬರ್ತೀಯ ಎಲ್ಲ ಗೊತ್ತು,+ಅಷ್ಟೇ ಅಲ್ಲ ನೀನು ಯಾವಾಗ ನನ್ನ ಮೇಲೆ ಕೋಪ ಮಾಡ್ಕೊಳ್ತೀಯ ಅಂತಾನೂ ನಂಗೊತ್ತು,+ 28  ಯಾಕಂದ್ರೆ ನನ್ನ ವಿರುದ್ಧ ನೀನು ಕೋಪ ಮಾಡ್ಕೊಳ್ಳೋದು,+ ಗರ್ಜಿಸೋದು ನನ್ನ ಕಿವಿಗೆ ಬಿದ್ದಿದೆ.+ ಹಾಗಾಗಿ ನಾನು ನಿನ್ನ ಮೂಗಿಗೆ ಕೊಕ್ಕೆಯನ್ನ, ನಿನ್ನ ಬಾಯಿಗೆ ಕಡಿವಾಣವನ್ನ ಹಾಕ್ತೀನಿ,+ನೀನು ಬಂದ ದಾರಿಯಲ್ಲೇ ನಿನ್ನನ್ನ ವಾಪಸ್‌ ಹೋಗೋ ತರ ನಾನು ಮಾಡ್ತೀನಿ.”+ 29  ಈ ಮಾತುಗಳೆಲ್ಲ ಖಂಡಿತ ನಿಜ ಆಗುತ್ತೆ. ಅದಕ್ಕಾಗಿ ನಾನು ನಿನಗೆ* ಈ ಸೂಚನೆ ಕೊಡ್ತೀನಿ: ಈ ವರ್ಷ ನೀವು ತಾನಾಗಿಯೇ ಬೆಳೆಯೋ ಬೆಳೆಯನ್ನ* ತಿಂತೀರ. ಎರಡ್ನೇ ವರ್ಷದಲ್ಲಿ ಆ ಬೆಳೆಯಿಂದ ಬಿದ್ದು ಮೊಳಕೆ ಒಡೆಯೋದನ್ನ ತಿಂತೀರ.+ ಆದ್ರೆ ಮೂರನೇ ವರ್ಷದಲ್ಲಿ ನೀವು ಬೀಜ ಬಿತ್ತಿ, ಅವುಗಳ ಫಲ ಕಟಾವು ಮಾಡ್ತೀರ. ದ್ರಾಕ್ಷಿತೋಟಗಳನ್ನ ಮಾಡಿ ಅದ್ರ ಫಲ ತಿನ್ತೀರ.+ 30  ಯೆಹೂದದ ಮನೆತನದವ್ರಲ್ಲಿ ಬದುಕುಳಿದವರು+ ಗಿಡಗಳ ತರ ಬೇರೂರುತ್ತಾರೆ, ಹಣ್ಣು ಕೊಡ್ತಾರೆ. 31  ಉಳಿದ ಜನ ಯೆರೂಸಲೇಮ್‌ ಬಿಟ್ಟು ಹೋಗ್ತಾರೆ. ಹೌದು ಯಾರು ಬದುಕಿ ಉಳಿತಾರೋ ಅವರು ಚೀಯೋನ್‌ ಬೆಟ್ಟದಿಂದ ಹೋಗ್ತಾರೆ. ಸೈನ್ಯಗಳ ದೇವರಾದ ಯೆಹೋವ ಇದನ್ನ ಹುರುಪಿಂದ ಮಾಡ್ತಾನೆ.+ 32  ಹಾಗಾಗಿ ಯೆಹೋವ ಅಶ್ಶೂರ್ಯರ ರಾಜನ ಬಗ್ಗೆ ಹೀಗೆ ಹೇಳ್ತಾನೆ:+ “ಅವನು ಈ ಪಟ್ಟಣಕ್ಕೆ ಬರಲ್ಲ,+ಇಲ್ಲಿಗೆ ಒಂದೇ ಒಂದು ಬಾಣನೂ ಹೊಡಿಯಲ್ಲ,ಗುರಾಣಿ ಹಿಡಿದು ದಾಳಿ ಮಾಡಲ್ಲ,ಇಳಿಜಾರು ದಿಬ್ಬ ಕಟ್ಟಿ ಪಟ್ಟಣದ ವಿರುದ್ಧ ಬರಲ್ಲ.+ 33  ಅವನು ಬಂದ ದಾರಿಯಲ್ಲೇ ವಾಪಸ್‌ ಹೋಗ್ತಾನೆ,ಅವನು ಈ ಪಟ್ಟಣದ ಒಳಗೆ ಬರಲ್ಲ” ಅಂತ ಯೆಹೋವ ಹೇಳಿದ್ದಾನೆ. 34  “ನನ್ನ ಹೆಸ್ರಿಗಾಗಿ,+ ನನ್ನ ಸೇವಕ ದಾವೀದನ ಸಲುವಾಗಿ+ನಾನು ಈ ಪಟ್ಟಣವನ್ನ ರಕ್ಷಿಸಿ ಉಳಿಸ್ತೀನಿ.”’”+ 35  ಅದೇ ರಾತ್ರಿ ಯೆಹೋವನ ದೂತ ಅಶ್ಶೂರ್ಯರ ಪಾಳೆಯಕ್ಕೆ ಹೋಗಿ 1,85,000 ಸೈನಿಕರನ್ನ ಸಾಯಿಸಿದ.+ ಜನ ಬೆಳಿಗ್ಗೆ ಬೇಗ ಎದ್ದು ನೋಡಿದಾಗ ಪಾಳೆಯದಲ್ಲೆಲ್ಲ ಶವಗಳು ಬಿದ್ದಿದ್ದವು.+ 36  ಹಾಗಾಗಿ ಅಶ್ಶೂರ್ಯರ ರಾಜ ಸನ್ಹೇರೀಬ ಅಲ್ಲಿಂದ ನಿನೆವೆಗೆ ವಾಪಸ್‌ ಹೋಗಿ+ ಅಲ್ಲೇ ಇದ್ದ.+ 37  ಒಂದಿನ ಅವನು ಆಲಯಕ್ಕೆ ಹೋಗಿ ತನ್ನ ದೇವರಾದ ನಿಸ್ರೋಕನಿಗೆ ಅಡ್ಡಬಿದ್ದು ನಮಸ್ಕಾರ ಮಾಡ್ತಿದ್ದಾಗ ಅವನ ಮಕ್ಕಳಾದ ಅದ್ರಮ್ಮೆಲೆಕ, ಸರೆಚೆರ ಕತ್ತಿಯಿಂದ ಅವನನ್ನ ಸಾಯಿಸಿದ್ರು.+ ಆಮೇಲೆ ಅವರು ತಪ್ಪಿಸ್ಕೊಂಡು ಅರರಾಟ್‌ ದೇಶಕ್ಕೆ ಓಡಿಹೋದ್ರು.+ ಸನ್ಹೇರೀಬನ ನಂತ್ರ ಅವನ ಮಗ ಏಸರ್‌-ಹದ್ದೋನ+ ರಾಜನಾದ.

ಪಾದಟಿಪ್ಪಣಿ

ಬಹುಶಃ, “ಮಧ್ಯದಲ್ಲಿ.”
ಅಥವಾ “ನೈಲ್‌ ಕಾಲುವೆಗಳನ್ನ.”
ಅಥವಾ “ಇದನ್ನ ರಚಿಸಿದ್ದೆ.”
ಅದು, ಹಿಜ್ಕೀಯ.
ಅಥವಾ “ಧಾನ್ಯಗಳ ಕಾಳುಗಳು ಚೆಲ್ಲಿ ಬೆಳೆಯೋ ಬೆಳೆಯನ್ನ.”