ಸದಾ ಎಚ್ಚರವಾಗಿರಿ!
ಈ ಹೊಡೆದಾಟ ಎಲ್ಲ ಯಾವಾಗ ನಿಲ್ಲುತ್ತೆ?—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಏಪ್ರಿಲ್ 13, 2024ರಲ್ಲಿ ಇಸ್ರೇಲ್ ಮೇಲೆ ಇರಾನ್ ಮಾಡಿದ ನೇರವಾದ ದಾಳಿ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ರವರು “ನಾವೀಗ ಪರಿಸ್ಥಿತಿ ಇನ್ನೂ ಹದಗೆಡದೆ ಇರೋ ತರ ನೋಡ್ಕೊಬೇಕು. ನಮಗೆ ಅನಿಸಿದ್ದನ್ನ ಮಾಡೋ ಸಮಯ ಇದಲ್ಲ” ಅಂತ ಹೇಳಿದ್ರು.
ಬರೀ ಮಧ್ಯ ಪ್ರಾಚ್ಯ ದೇಶಗಳಲ್ಲಷ್ಟೇ ಅಲ್ಲ, ಪ್ರಪಂಚದ ಎಲ್ಲಾ ಕಡೆ ಯುದ್ಧ ನಡೀತಿದೆ.
“ಎರಡನೇ ಮಹಾಯುದ್ಧದ ಸಮಯದಿಂದ ಹಿಂಸೆ, ಹೊಡೆದಾಟ, ದಾಳಿಗಳು ತುಂಬ ಜಾಸ್ತಿ ಆಗಿದೆ. ಇದ್ರಿಂದ 200 ಕೋಟಿ ಜನ್ರಿಗೆ ಅಂದ್ರೆ ಇಡೀ ಭೂಮಿಯಲ್ಲಿರೋ ಮನುಷ್ಯರಲ್ಲಿ ಕಾಲುಭಾಗದಷ್ಟು ಜನ್ರಿಗೆ ತೊಂದ್ರೆ ಆಗಿದೆ.”—ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಜನವರಿ 26, 2023.
ಇಸ್ರೇಲ್, ಗಾಜ಼ಾ, ಸಿರಿಯ, ಅಜರ್ಬೈಜಾನ್, ಉಕ್ರೇನ್, ಸುಡಾನ್, ಇಥಿಯೋಪಿಯಾ, ನೈಜರ್, ಮಯನ್ಮಾರ್, ಹೈಟಿಯಲ್ಲೂ ಹೊಡೆದಾಟಗಳು ನಡಿತಾ ಇವೆ. a
ಈ ಹೊಡೆದಾಟ ಎಲ್ಲ ಯಾವಾಗ ನಿಲ್ಲುತ್ತೆ? ಈ ಲೋಕದ ನಾಯಕರಿಂದ ಶಾಂತಿ ತರಕ್ಕಾಗುತ್ತಾ? ಬೈಬಲ್ ಏನು ಹೇಳುತ್ತೆ?
ಎಲ್ಲಿ ನೋಡಿದ್ರೂ ಯುದ್ಧಾನೇ
ಇವತ್ತು ರಾಷ್ಟ್ರಗಳು ಒಂದ್ರ ಮೇಲೊಂದು ಮುಗಿಬೀಳ್ತಾ ಇರೋದು ಈ ಯುದ್ಧಗಳು ಆದಷ್ಟು ಬೇಗ ನಿಂತುಹೋಗುತ್ತೆ ಅಂತ ತೋರಿಸುತ್ತೆ. ಯಾಕಂದ್ರೆ ನಾವೀಗ ಇರೋದು ‘ಲೋಕದ ಅಂತ್ಯಕಾಲದಲ್ಲಿ.’ ಅದನ್ನ ಹೇಗೆ ಹೇಳಬಹುದು? ಯಾಕಂದ್ರೆ ಈ ಲೋಕದ ಅಂತ್ಯಕಾಲದಲ್ಲಿ ಯುದ್ಧಗಳಾಗುತ್ತೆ ಅಂತ ಬೈಬಲ್ ಮುಂಚೆನೇ ಹೇಳಿತ್ತು.—ಮತ್ತಾಯ 24:3.
“ಯುದ್ಧ ನಡಿಯೋದನ್ನ, ಯುದ್ಧ ಆಗ್ತಾ ಇದೆ ಅನ್ನೋ ಸುದ್ದಿಯನ್ನ ನೀವು ಕೇಳ್ತೀರ . . . ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ.”—ಮತ್ತಾಯ 24:6, 7.
ನಮ್ಮ ಕಾಲದಲ್ಲಿ ಯುದ್ಧ ನಡಿಯುತ್ತೆ ಅಂತ ಬೈಬಲಲ್ಲಿ ಮುಂಚೆನೇ ಹೇಳಿದ್ದ ಭವಿಷ್ಯವಾಣಿ ಹೇಗೆ ನಿಜ ಆಗ್ತಿದೆ ಅಂತ ತಿಳ್ಕೊಳ್ಳೋಕೆ “‘ಕೊನೇ ದಿನಗಳ’ ಅಥವಾ ‘ಅಂತ್ಯಕಾಲದ’ ಸೂಚನೆಗಳೇನು?” ಅನ್ನೋ ಲೇಖನ ಓದಿ.
ಎಲ್ಲಾ ಯುದ್ಧಗಳನ್ನ ನಿಲ್ಲಿಸೋ ಒಂದು ಯುದ್ಧ
ಮನುಷ್ಯರು ಮಾಡ್ತಿರೋ ಯುದ್ಧಗಳು ನಿಂತುಹೋಗುತ್ತೆ ಅಂತ ಬೈಬಲ್ ಮುಂಚೆನೇ ಹೇಳಿದೆ. ಅದು ಹೇಗೆ ಆಗುತ್ತೆ? ಮನುಷ್ಯರಿಂದ ಅಂತೂ ಖಂಡಿತ ಅದನ್ನ ನಿಲ್ಲಿಸಕ್ಕಾಗಲ್ಲ. ಬದಲಿಗೆ “ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧ” ಅಂದ್ರೆ ಹರ್ಮಗೆದೋನ್ ಯುದ್ಧ ಅದನ್ನ ನಿಲ್ಲಿಸುತ್ತೆ. (ಪ್ರಕಟನೆ 16:14, 16) ಈ ಯುದ್ಧ ಆದ್ಮೇಲೆ ಮನುಷ್ಯರು ಶಾಶ್ವತವಾಗಿ ಶಾಂತಿ ಸಮಾಧಾನದಿಂದ ಜೀವಿಸ್ತಾರೆ. ಹೀಗೆ ದೇವರು ತಾನು ಕೊಟ್ಟ ಮಾತನ್ನ ನಿಜ ಮಾಡ್ತಾನೆ.—ಕೀರ್ತನೆ 37:10, 11, 29.
ದೇವರು ಮಾಡೋ ಯುದ್ಧ ಎಲ್ಲಾ ಯುದ್ಧಗಳನ್ನ ಹೇಗೆ ನಿಲ್ಲಿಸುತ್ತೆ ಅಂತ ತಿಳ್ಕೊಳ್ಳೋಕೆ “ಹರ್ಮಗೆದೋನ್ ಯುದ್ಧ ಅಂದರೇನು?” ಅನ್ನೋ ಲೇಖನ ಓದಿ.
a ಜನವರಿ 2024 ಎಸಿಎಲ್ಇಡಿ ಕಾನ್ಫ್ಲಿಕ್ಟ್ ಇಂಡೆಕ್ಸ್ “ಇಡೀ ಪ್ರಪಂಚದಲ್ಲೇ ಹಿಂಸಾತ್ಮಕ ಹೊಡೆದಾಟಗಳು ನಡಿಯೋ ದೇಶಗಳ ಶ್ರೇಣಿ”